ಬೆರಿಂಗ್ ಜಲಸಂಧಿ
ಅಟ್ಲಾಂಟಿಕ್ ಸಾಗರದ ಉತ್ತರದ ಕೊನೆಯಲ್ಲಿ ಆರ್ಕಟಿಕ್ ಸಾಗರವನ್ನೂ ಬೆರಿಂಗ್ ಸಮುದ್ರವನ್ನೂ ಸೇರಿಸುವ ಜಲಸಂಧಿ.  ಇದರಿಂದ ಏಷ್ಯಾ (ರಷ್ಯದ ಸೈಬೀರಿಯ ಭಾಗ) ಮತ್ತು ಉತ್ತರ ಅಮೆರಿಕ(ಅಮೆರಿಕ ಸಂಯುಕ್ತ ಸಂಸ್ಥಾನದ ಅಲಾಸ್ಕ) ಪ್ರತ್ಯೇಕಗೊಂಡಿವೆ.  ಜಲಸಂಧಿಯಲ್ಲಿ ಸಮುದ್ರದ ಆಳ 30-60 ಮೀ ಮಾತ್ರ. ಇದರ ಅತ್ಯಂತ ಕಿರಿದಾದ ಭಾಗ 85 ಕಿಮೀ ಅಗಲವಿದೆ. ಜಲಸಂಧಿಯ ನಡುವೆ ಪರಸ್ಪರ 3 ಕಿಮೀ ದೂರದಲ್ಲಿ ಡೈಯಮೀಡ್ ಎಂಬ ಎರಡು ದ್ವೀಪಗಳಿವೆ. ಈ ದ್ವೀಪಗಳ ನಡುವೆ ಅಮೆರಿಕ ಸಂಯುಕ್ತ ಸಂಸ್ಥಾನ ಹಾಗೂ ಸೋವಿಯೆತ್ ದೇಶಗಳ ಮಧ್ಯದ ಗಡಿರೇಖೆ ಮತ್ತು ಅಂತಾರಾಷ್ಟ್ರೀಯ ದಿನರೇಖೆ ಹಾದುಹೋಗಿವೆ. ದೊಡ್ಡ ಡೈಯಮೀಡ್ ದ್ವೀಪ ಸೋವಿಯೆತ್ ದೇಶಕ್ಕೂ ಚಿಕ್ಕ ಡೈಯಮೀಡ್ ದ್ವೀಪ ಅಮೆರಿಕಕ್ಕೂ ಸೇರಿವೆ. ಈ ಎರಡೂ ದ್ವೀಪಗಳಲ್ಲಿ ಎಸ್ಕಿಮೋ ಜನ ವಾಸಿಸುತ್ತಾರೆ. ದೊಡ್ಡ ಡೈಯಮೀಡ್‍ನಲ್ಲಿ ಸೋಮಿಯೆತ್ ಹವಾ ವೀಕ್ಷಣಾಲಯವಿದೆ. ಈ ಜಲಸಂಧಿಯನ್ನು ವೀಟುಸ್ ಬೇರಿಂಗ್ ಆವಿಷ್ಕರಿಸಿದ (1728).   
 (ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ